ಕೃಪ

ಗೌತಮವಂಶದ ಶರದ್ವಂತನೆಂಬ ಬ್ರಾಹ್ಮಣ ಮುನಿಯ ಮಗ. ಶರದ್ವಂತನ ತಪಸ್ಸನ್ನು ಕೆಡಿಸಲು ಇಂದ್ರ ಕಳಿಸಿದ ಜಾಲವತಿ (ಜಾನಪದಿ) ಎಂಬ ಅಪ್ಸರೆಯಲ್ಲಿ ಹುಟ್ಟಿದವ; ರುದ್ರಗಣಾಂಶಸಂಭೂತ, ಜೊತೆಗೇ ಹುಟ್ಟಿದವಳು ಕೃಪಿ. ಈಕೆ ದ್ರೋಣರ ಹೆಂಡತಿ. ಆಶ್ವತ್ಥಾಮನ ತಾಯಿ. ಇವರನ್ನು ಶಂತನು ಸಾಕಿ ಆ ಹೆಸರುಗಳನ್ನಿಟ್ಟ. ಆಮೇಲೆ ಶರದ್ವಂತ ಅವರು ತನ್ನ ಮಕ್ಕಳೆಂಬುದನ್ನು ಶಂತನುವಿಗೆ ತಿಳಿಸಿ ಕೃಪನಿಗೆ ಉಪನಯನಾದಿ ಸಂಸ್ಕಾರಗಳನ್ನು ಮಾಡಿಸಿ, ಧನುರ್ವಿದ್ಯೆಯನ್ನು ಕಲಿಸಿದ. ಅನಂತರ ಪಾಂಡವ ಕೌರವರಿಗೆ ಕೃಪಾಚಾರ್ಯ ಧನುರ್ವಿದ್ಯೆಯ ಗುರುವಾಗಿದ್ದ. ಪಾಂಡವ ಪಕ್ಷಪಾತಿಯಾದರೂ ಮಹಾಭಾರತ ಯುದ್ಧದಲ್ಲಿ ಈತ ಕೌರವಪಕ್ಷದಲ್ಲಿದ್ದ. ಗೋಹರಣ ಪ್ರಸಂಗದಲ್ಲೂ ಕರ್ಣನಿಗೆ ಸೇನಾಪತ್ಯ ಬಂದ ಪ್ರಸಂಗದಲ್ಲೂ ಕರ್ಣನನ್ನು ನಿಂದಿಸಿದ. ಭಾರತಯುದ್ಧದಲ್ಲಿ ಅರ್ಜುನನಿಂದ ಸೋತು ಅವನನ್ನು ಪ್ರಶಂಸಿಸಿದ. ಪಾಂಡವ ಸೇನಾಪತಿಯಾದ ಧೃಷ್ಟದ್ಯುಮ್ನನನ್ನು ಯುದ್ಧದಲ್ಲಿ ಸೋಲಿಸಿದ. ಭಾರತಯುದ್ಧದ 18ನೆಯ ದಿನದ ರಾತ್ರಿಯಲ್ಲಿ ಕೌರವ ಮಡಿದಮೇಲೆ ಅಶ್ವತ್ಥಾಮ ಪಾಂಡವ ಶಿಬಿರವನ್ನು ಹೊಕ್ಕು ಪಾಂಡವೀಯರನ್ನು ಕೊಲ್ಲಹೋದಾಗ ಕೃಪ ಅವನಿಗೆ ವಿಶೇಷವಾಗಿ ಬುದ್ಧಿ ಹೇಳಿ ವಿಫಲನಾದ. ಯುದ್ಧಾನಂತರ ಕೌರವಪಕ್ಷೀಯರಲ್ಲಿ ಉಳಿದ ಮೂವರಲ್ಲಿ ಕೃಪನೊಬ್ಬ, ಯುಧಿಷ್ಠಿರನಿಗೆ ಪಟ್ಟಾಭಿಷೇಕವಾದಮೇಲೆ ಪಾಂಡವರ ಆಶ್ರಯದಲ್ಲಿದ್ದ, ಶರದ್ವಂತನ ಮಗನಾದುದರಿಂದ ಶಾರದ್ವತನೆಂದೂ ಗೌತಮವಂಶದವನಾದುದರಿಂದ ಗೌತಮನೆಂದೂ ಕೃಪನಿಗೆ ಇನ್ನೆರಡು ಹೆಸರುಗಳಿವೆ. ಈತ ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಪರಶುರಾಮರಂತೆ ಚಿರಂಜೀವಿ, ಪರೀಕ್ಷಿತನಿಗೆ ಕೃಪ ಧನುರ್ವಿದ್ಯೆಯನ್ನು ಕಲಿಸಿದನೆಂದು ಹೇಳಲಾಗಿದೆ. 	 (ಬಿ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ